Saturday, June 30, 2012


ಅಭಿವೃದ್ಧಿ ಹಾಳಾದರೂ, ಬಿಜೆಪಿಯಲ್ಲಿ ಕುರ್ಚಿ ಕುಸ್ತಿ ನಡೆಯುತ್ತಿದೆ.

ಶ್  !! ಕಾಂಗ್ರೆಸಿಗರು ನಿದ್ದೆ ಮಾಡುತ್ತಿದ್ದಾರೆ

ರೋ ಹತ್ತಿ ಉರಿಯುವಾಗ ನಿರೋ ಪಿಟೀಲು ಬಾರಿಸುತ್ತಿದ್ದನಂತೆ ಹಾಗಿದೆ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪ್ರತಿಪಕ್ಷವಾದ  ಕಾಂಗ್ರೆಸ್ ನ ವರ್ತನೆ.
ಹನ್ನೊಂದು ತಿಂಗಳ ಹಿಂದೆ ಮುಖ್ಯಮಂತ್ರಿ ಹುದ್ದೆಗೇರಿದ ಸದಾನಂದಗೌಡರನ್ನು ಪದಚ್ಯುತಗೊಳಿಸಲು ಬಿಜೆಪಿಯಲ್ಲಿ ಒಳಸಂಚು ನಡೆಯುತ್ತಿದೆ. ಈಗಾಗಲೇ 12 ಮಂದಿ ಸಚಿವರು ಹಗರಣಗಳಿಂದ ರಾಜೀನಾಮೆ ನೀಡಿದ್ದಾರೆ. 5ಕ್ಕೂ ಹೆಚ್ಚು ಮಂದಿ ಸಚಿವರು ರಾಜಕೀಯ ಏರುಪೇರುಗಳಿಗೆ ಸ್ಥಾನಪಲ್ಲಟವಾಗಿದ್ದಾರೆ. ಪ್ರತಿ ವರ್ಷವೂ ಬಜೆಟ್ನಲ್ಲಿ ಶೇ.50ರಷ್ಟು ಅನುದಾನವೂ ಖರ್ಚಾಗುತ್ತಿಲ್ಲ. ಈ ವರ್ಷ 1.02 ಲಕ್ಷ ಕೋಟಿ ರೂ.ಗಳ ಬಜೆ್ ಮಂಡಿಸಲಾಗಿದೆ, ಅದರಲ್ಲಿ ಈವರೆಗೆ ಶೇ.10ರಷ್ಟು ಖರ್ಚಾಗಿಲ್ಲ. ಇದ್ಯಾವುದರ ಬಗ್ಗೆಯೂ ಕಾಂಗ್ರೆಸ್ ಚಕಾರವೆತ್ತುತ್ತಿಲ್ಲ.
ಬಿಜೆಪಿ ಆಂತರಿಕ ಬೆಳವಣಿಗೆ ತಮಗೆ ಸಂಬಂಧಿಸಿದ್ದಲ್ಲ ಎಂದು ಒಂದು ವಾಕ್ಯದ ಅಭಿಪ್ರಾಯ ಬಿಸಾಕಿ ಕಾಂಗ್ರೆಸಿಗರು ನಿದ್ದೆ ಮಾಡುತ್ತಿದ್ದಾರೆ. ಹಿರಿಯ ನಾಯಕರಿಗಿಂತ ಕಿರಿಯ ಕಾರ್ಯಕರ್ತರೆ ಕಾಂಗ್ರೆಸ್ ನಲ್ಲಿ ಎಷ್ಟೊ ಮೇಲು ಎಂಬಂತಾಗಿದೆ. ಆಡಳಿತಾ ರೂಢ ಪಕ್ಷದ ಜನ ವಿರೋಧ ವರ್ತನೆಗಳು, ಅಭಿವೃದ್ಧಿ ಶೂನ್ಯತೆಯನ್ನು ಕಿರಿಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಹಿರಿಯರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬರ್ಥದಲ್ಲಿ ಆರಾಮಾಗಿದ್ದಾರೆ.
ಮಾಧ್ಯಮದವರು ಬಲವಂತವಾಗಿ ಮುಖದ ಮುಂದೆ ಮೈಕಹಿಡಿದರೆ ``ಈ ಸರ್ಕಾರ ತೊಲಗಬೇಕು.., ಚುನಾವಣೆ ಬರಬೇಕು.., ಜನ ವಿರೋಧಿ ಆಡಳಿತ.., ಎಂದು ಹಳಸಲು ವಾಕ್ಯಗಳನ್ನು ಉದುರಿಸಿ ಗಂಟಲು ಶೋಷಣೆ ಮಾಡಿಕೊಂಡು ಬಿಸಲರಿ ನೀರು ಕುಡಿದು ಧಣಿವಾರಿಸಿಕೊಳ್ಳುತ್ತಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣಬ್  ಮುಖರ್ಜಿ ಅವರ ನಾಮಪತ್ರಕ್ಕೆ ಸಹಿ ಹಾಕಲು ದೆಹಲಿಗೆ ತೆರಳಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲಿಂದ ವಾಪಾಸಾದ ನಂತರ ಸೀದಾ ಗೋಕರ್ಣಕ್ಕೆ ತೆರಳಿ ಅಲ್ಲಿನ ಖಾಸಗಿ ರೆಸಾರ್ಟ್  ವೊಂದರಲ್ಲಿ ವಿಶ್ರಾಂತಿಗೆ ಕೂತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಕೂಡ ಇದೇ ರೀತಿ ವಿಶ್ರಾಂತಿ ಮೂಡ್ ನಲ್ಲಿದ್ದಾರೆ.
ಬಿಜೆಪಿಯ ಆಂತರಿಕ ಬೆಳವಣಿಗೆಗೂ ಕಾಂಗ್ರೆ್ಗೂ ಸಂಬಂಧವಿಲ್ಲ ಎಂಬ ವಾದ ಸರಿಯಾಗಿಯೇ ಇದೆ. ಆದರೆ, ಪ್ರತಿಪಕ್ಷವಾದ ಕಾಂಗ್ರೆಸ್ಗೂ, ಆಡಳಿತ ವ್ಯವಸ್ಥೆಗೂ ಸಂಬಂಧವಿದೆಯಲ್ಲ ಎಂಬ ಸತ್ಯವನ್ನು ಹಿರಿಯ ನಾಯಕರು ಮರೆತಿದ್ದಾರೆ. ಏಕೆಂದರೆ ರಾಜ್ಯದ ಶೇ.32ರಷ್ಟು ಜನ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಎಲ್ಲವೂ ಬಿಜೆಪಿ ಕರ್ಮ ಎಂದಾದರೆ ರಾಜ್ಯದಲ್ಲಿ ವಿರೋಧ ಪಕ್ಷದ ಅಗತ್ಯವಾದರೂ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
ಈಶ್ವರಪ್ಪ ಪಠ್ಯಕ್ರಮದಲ್ಲಿ ಕೆಸರೀಕರಣವಾಗಬೇಕು ಎಂದು ಹೇಳಿಕೆ ನೀಡಿ, ಅದನ್ನು ಬಲವಾಗಿ ಸಮರ್ಥಿಸಿಕೊಂಡು ಜೈಲಿಗೆ ಹೋಗಲು ಸಿದ್ಧ ಘೋಷಿಸಿದ ವಾರವಾಗಿದೆ, ಎಲ್ಲವೂ ತಣ್ಣಗಾಯಿತು ಎಂದಾಗ ಕೆಪಿಸಿಸಿ ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದು ಖಂಡನಾ ಹೇಳಿಕೆ ನೀಡುತ್ತಾರೆ.
ಸೂಕ್ಷ್ಮ ಸಂವೇದನೆ, ಚುರುಕು ಪ್ರತಿಕ್ರಿಯೆ ಎರಡನ್ನು ಕಳೆದುಕೊಂಡಿರುವ ಕಾಂಗ್ರೆಸಿಗರ ದಪ್ಪ ಚರ್ಮದ ವರ್ತನೆ ಬಿಜೆಪಿಯ ಮೇಲಾಟಗಳಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ. ಅಧಿಕಾರಕ್ಕಾಗಿ ಹಾದಿ ಬಿದಿ ಜಗಳ ಮಾಡಿಕೊಂಡರು ಕೇಳುವವರಿಲ್ಲ. ವಿಧಾನಸೌಧದ ಕಡೆ ತಿಂಗಳುಗಟ್ಟಲೆ ತಲೆ ಹಾಕದಿದ್ದರೂ ಪ್ರಶ್ನಿಸುವವರಿಲ್ಲ. ಪ್ರವಾಸದ ನೆಪದಲ್ಲಿ ಭಿನ್ನಮತೀಯ ಚಟುವಟಿಕೆ ಮಾಡುತ್ತಿದ್ದರೂ ಕೆಣಕುವವರಿಲ್ಲ.
ಒಂದರ್ಥದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ವಿರೋಧ ಪಕ್ಷವೇ ಇಲ್ಲ. ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿಗರೆ ಕಾರಣ ಎಂಬ ಮಾತು ಎಷ್ಟು ಸತ್ಯವೂ ಹಾಗೇ ಬಿಜೆಪಿಗೆ ಬಿಜೆಪಿ ಮಾತ್ರ ವಿರೋಧ ಪಕ್ಷ ಎಂಬ ಸತ್ಯವೂ ಅಷ್ಟೇ ಜನಜನಿತವಾಗುತ್ತಿದೆ.
ತಮ್ಮಲ್ಲೇ ಮೂಟೆಗಟ್ಟಲೆ ಹುಳುಕುಗಳಿರುವಾಗ ಪಾಪಾ ಬಿಜೆಪಿಯ ತಂಟೆಗೆ ನಾವೇಕೆ ಹೋಗುವುದು ಎಂಬುದು ಕಾಂಗ್ರೆಸ್ನ ಭಿನ್ನಮತೀಯರ ಕುಹಕ. ಏಕಮುಖ್ಯಮಂತ್ರಿಯಾಗುವ ಕನಸಿನಲ್ಲಿ ಎಲ್ಲ ಮುಖಂಡರು ತೇಲುತ್ತಿದ್ದಾರೆ. ಚಿಕ್ಕಮಗಳೂರು-ಉಡುಪಿ ಲೋಕಸಭಾಕ್ಷೇತ್ರದ ಚುನಾವಣೆಯಲ್ಲಿ ಗೆದ್ದಾಗ ಅದರ ಕೀರ್ತಿ ತಮಗೇ ಸಲ್ಲಬೇಕು ಎಂದು ಪ್ರತಿಪಾದಿಸಲು ಡಜ್ಗಟ್ಟಲೆ ನಾಯಕರು ಹೈಕಮಾಂಡ್  ಮುಂದೆ ಮಾರ್ಚ್ ಪಾಸ್ಟ್  ಮಾಡಿದರು. 
ಇತ್ತೀಚೆಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ವಿಧಾನ ಪರಿಷ್ ಚುನಾವಣೆಯಲ್ಲಿ ಕಾಂಗ್ರೆಸ್ ಆರರ ಪೈಕಿ ಒಂದರಲ್ಲೂ ಗೆಲ್ಲದೆ ಮೂಲೆ ಗುಂಪಾದಾಗ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮುಖ ಮುಚ್ಚಿಕೊಂಡು ಸೈಡಿಗೆ ಹೋದರು. ಕಾಂಗ್ರೆಸ್ ಧೋರಣೆ ಈ ರೀತಿ ಇರುವಾಗ ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಬಿಜೆಪಿಯವರು ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ. ಬೇಕಾದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ, ಬೇಡವಾದಾಗ ವಾಪಾಸ್  ಪಡೆಯುತ್ತಾರೆ. ಇಲಾಖಾ ಅಭಿವೃದ್ಧಿ ಕಾರ್ಯಗಳು ಹಾಳಾಗಿ ಹೋಗಿರುತ್ತವೆ.
ಇಲ್ಲಿ ಯಾವುದೂ ಪ್ರಶ್ನಾರ್ಹವಲ್ಲ, ಏಕೆಂದರೆ ಪ್ರಶ್ನಿಸುವವರೆ ಇಲ್ಲವಲ್ಲ. ಸಾಮಾನ್ಯ ನಾಗರಿಕರು ಮತ್ತು ಸಂಘಟನೆಗಳು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರ ಪೈಕಿ ಕಾಲು ಭಾಗವೂ ಪ್ರತಿಪಕ್ಷವಾದ ಕಾಂಗ್ರೆಸ್ ಬಿಜೆಪಿಯನ್ನು ದಂಡಿಸಿಲ್ಲ. ಇನ್ಯಾವ ಪುರುಷಾರ್ಥಕ್ಕೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಇರಬೇಕು.

No comments: