Thursday, January 7, 2010

ಏನಾದರು ಮಾಡು ಮೌನವಾಗಿರ ಬೇಡ
ಕೊಲ್ಲುತ್ತಿದೆ ಅದು ನನ್ನ..........
ಮಳೆಯಿಲ್ಲ, ನೆರೆಯಿಲ್ಲ, ಬರವೂ ಇಲ್ಲ
ಅದರೂ ಆತಂಕ ತಪ್ಪಿಲ್ಲ....

ಬದುಕೆಂದರೆ ಇದೇನಾ
ಹುಟ್ಟು ಆಕಸ್ಮಿಕ, ಸಾವು ಖಚಿತವಂತೆ
ಆದರೂ ಇಷ್ಟೊಂದು ಅಸೇಗಳೇಕೆ
ಬದುಕ ಬೇಕಿದೆ ನಿನಗಾಗಿ ನಿನ್ನ ನಗುವಿಗಾಗಿ....

Tuesday, January 5, 2010

ಗಣಿಗೆ ಕಡಿವಾಣವೇನು ?

ರಾಜಕಾರಣ ಹೊಲಸಾಗಿದೆ, ಇದು ಇಂದು  ಪ್ರಾಮಾಣಿಕ, ಸಭ್ಯರ ಕ್ಷೇತ್ರವಾಗಿಲ್ಲ. ಹಣಬಲ, ತೋಲ್ಬಲ ಇದ್ದವರಿಗೆ ಮಾತ್ರ ರಾಜಕೀಯ................
ಮೊದಲು ಅಭ್ಯರ್ಥಿಯ ಯೋಗ್ಯತೆ ಮೇಲೆ ಚುನಾವಣೆಗಳು ನಡೆಯುತ್ತಿದ್ದವಂತೆ ಎಂಬ ಅತಿಶೋಯೋಕ್ತಿ ವಿಷಯವನ್ನು ಮುಂದಿನ ಪೀಳಿಗೆಗೆ ಕಥೆ ರೂಪದಲ್ಲಿ ಹೇಳುವ ಸ್ಥಿತಿ ಖಂಡಿತಾ ಬರುತ್ತದೆ. ಈಗಾಗಲೇ ರಾಜಕಾಣದಲ್ಲಿ ಪ್ರಾಮಾಣಿಕರು ಅಲ್ಪಸಂಖ್ಯಾತರಾಗಿದ್ದಾರೆ. ಲಾಭಕ್ಕಾಗಿ ರಾಜಕೀಯವನ್ನು ಆಯ್ಕೆ ಮಾಡಿಕೊಂಡವರು ಬಹುಸಂಖ್ಯಾತರಾಗಿದ್ದಾರೆ. ಆದಾಗ್ಯೂ ಮೋಜಿನ ಸಂಗತಿಯೆಂದರೆ ಜನ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿಯೇ ತಮ್ಮ ಮೂಲ ಮಂತ್ರ. ನನಗೆ ಅಧಿಕಾರದ ಆಸೆಯಿಲ್ಲ ಜನರ ಒಲವು ಸಾಕು.......... ಈ ಸ್ಲೋಗನ್ ಗಳು ತೀರಾ ಹಾಸ್ಯಾಸ್ಪದವಾಗಿ ಕಾಣುತ್ತಿವೆ.
ಈ ಹೇಳಿಕೆ ನೀಡುವವರು ತಮ್ಮನ್ನು ತಾವು ಬೃಹಸ್ಪತಿಗಳು ಎಂದುಕೊಂಡಂತ್ತಿದೆ. ಅತ್ಯಂತ ನಾಚಿಕೆಗೇಡಿನ ಹೇಳಿಕೆಯನ್ನು ಅತ್ಯಂತ ನಿರ್ಲಜ್ಯದಿಂದ ಹೇಳುವ ಧಾಟಿಯೇ ರಾಜಕೀಯ ಯಾವ ಮಟ್ಟದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ತ್ತೀಚೆಗೆ ಪ್ರಮುಖ ಪತ್ರಿಕೆಯ ಮುಖ್ಯ ವರದಿಗಾರರೊಬ್ಬರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅದೇ ಪತ್ರಿಕೆಯ ಸಂಪಾದಕರು ರಾಜಕೀಯ ಕಲುಶಿತಗೊಳ್ಳುತ್ತಿರುವುದನ್ನು ಸದ್ಧಾಂತವಾಗಿ ವಿವರಿಸಿದರು. ಪಕ್ಷಾಂತರದ ಬಗ್ಗೆ ಅವರು ವ್ಯಕ್ತಪಡಿಸಿದ ಆತಂಕಕ್ಕೆ ವೇದಿಕೆಯಲ್ಲಿದ್ದ ಗಣ್ಯ ಸಿದ್ದರಾಮಯ್ಯ ಮತ್ತು  ಎಂ.ಸಿ.ನಾಣಯ್ಯ ಪತ್ರಿಕಾ ರಂಗದ ಮೇಲಿನ ಪ್ರತಿದಾಳಿ ಮೂಲಕ ಉತ್ತರ ನೀಡಿದರು.
ಒಂದು ಹಂತದಲ್ಲಿ ನಾವೇಲ್ಲಾ ಕಳ್ಳರೆ, ನೀವೇನು?ಎಂಬ ಪ್ರಶ್ನೆಯನ್ನು ಈ ಇಬ್ಬರು ಮುಖಂಡರು ತಿರುಗುಬಾಣವಾಗಿ ಎಸೆದರು. ಇದಕ್ಕೆ ಮತ್ತೆ  ಉತ್ತರ ನೀಡಲು ವೇದಿಕೆಯಲ್ಲಿದ್ದ ಬೇರೆ ಯಾವ ಪತ್ರಕರ್ತರು ಮಾತನಾಡಲು ಅವಕಾಶವಿಲ್ಲವಾದ್ದರಿಂದ, ಸ್ಪಷ್ಟನೆ ದೊರೆಯಲಿಲ್ಲ. ಹಾಹಾಗಿ ಆ ವಿಷಯ ಅಷ್ಟೆಕ್ಕೆ ಮುಗಿದು ಹೋಯಿತು. ಇಲ್ಲಿ ಒಂದು ವಿಷಯವಂತೂ ಸ್ಪಷ್ಟವಾಯಿತು. ಕಳ್ಳಕಳ್ಳರು ಸಂತೆಗೆ ಹೋಗಿದ್ದಾರೆ ಎಂದು ಸಾರ್ವಜನಿಕವಾಗಿ ಒಂದು ಸಂದೇಶ ರವಾನೆಯಾಯಿತು.
ಇದೆಲ್ಲಾ ಇರಲಿ ರಾಜಕೀಯದಲ್ಲಿ ಪ್ರಾಮಾಣಿಕರು ಸಭ್ಯರೆ ಇಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆನು ಎಂಬ ಪ್ರಶ್ನೆಯು ಕಾಡುತ್ತಿದೆ. ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂವಿಧಾನ ಬದ್ಧವಾಗಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಇಡೀ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿವೆ. ಕಾರ್ಯಾಂಗ ಶಾಸಕಾಂಗದ ಅಡಿಯಲ್ಲಿ ಬೆಸೆತುಹೋಗಿದೆ. ಶಾಸಕಾಂಗ ತನ್ನ ಪ್ರತ್ಯೇಕತೆ ಕಾಯ್ದುಕೊಳ್ಳುತ್ತಿದೆ.
ಪುಣ್ಯಕ್ಕೆ ಭಾರತದಲ್ಲಿ ಈವರೆಗೆ ಪಾಕಿಸ್ತಾನದಂತೆ ಮಿಲಟರಿಯ ಸರ್ವಾಧಿಕಾರಿಗಳು ಹುಟ್ಟು ಪಡೆದಿಲ್ಲ. ಹಲವು ಅವ್ಯವಸ್ಥೆಗಳ ನಡುವೆಯೂ ಪ್ರಜಾಪ್ರಭುತ್ವ ತೆವಳುತಲೆ ಜೀವನ ಸಾಗಿಸುತ್ತಿದೆ. ಒಂದು ವೇಳೆ ರಾಜಕೀಯ ಸಂಪೂರ್ಣವಾಗಿ ಭ್ರಷ್ಟವಾಗಿದೆ ಎಂದು ಜನತೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡರೆ ನಂತರದ ಆಯ್ಕೆ ಏನು ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ.
 ಭ್ರಷ್ಟರ ನಡುವೆಯೂ ಕೆಲವರು ಕಡಿಮೆ ಭ್ರಷ್ಟರಿದ್ದಾರೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಭೀಕರ ಸ್ಥಿತಿ ಬಂದೊದಗಿದೆ. ಇತ್ತೀಚೆಗೆ ಮಾಜಿ ಅರಣ್ಯ ಸಚಿವ ಕೆ.ಎಚ್‌.ರಂಗನಾಥ್‌ರಿಗೆ ವಿವಿಧ ಸಂಘಟನೆಗಳು ಸನ್ಮಾನಿಸಿ ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಉಳಿದುಕೊಂಡ ವ್ಯಕ್ತಿ ಎಂದು ಕೊಂಡಾಡಿದವು. ಅದೇ ಇಲಾಖೆಯನ್ನು ನಿರ್ವಹಿಸಿದ ಚನ್ನಿಗಪ್ಪ ಎಂಬ ಸಚಿವ 150 ಕೋಟಿ ರೂಪಾಯಿ ಲಂಚ ಸ್ವೀಕರಿಸಿ ಆಗಿನ ಮುಖ್ಯಮಂತ್ರಿಯವರಿಗೆ ನೀಡಿದ್ದ ಆರೋಪಕ್ಕೆ ಸಿಲುಕಿದರು. ರಂಗನಾಥ್‌ರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದಾಗ ಕೆಲವೆ ದಿನಗಳ ಅಂತರದಲ್ಲಿ ಅದೇ ರಾಜಕಾರಣಿಗಳಲ್ಲಿ ಎಷ್ಟೊಂದು ವ್ಯತ್ಯಾಸ ಎಂಬ  ಜಿಜ್ಞಾಸೆ ಕಾಡಿತ್ತು.
ಜನವರಿ 5 ರಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಎಸ್‌.ಉಗ್ರಪ್ಪ ನಿವೃತ್ತಿಯಾದರು. ತಮ್ಮನ್ನು ತಾವು ಪ್ರಾಮಾಣಿಕ ಎಂದು ಘೋಷಿಸಿಕೊಂಡಿರುವ ಅವರು, ಪದೇ ಪದೇ ತಮ್ಮನ್ನು ಸೇರಿದಂತೆ ಎಲ್ಲ ರಾಜಕಾರಣಿಗಳ ಆಸ್ತಿಯು ಸಿಬಿಐ ತನಿಖೆಯಾಗಲಿ ಎಂದು ಒತ್ತಾಯಿಸುತ್ತಿರುತ್ತಾರೆ.
ಕಾಂಗ್ರೆಸ್‌ ಅವರ ಹೆಗಲಿಗೆ ಅಕ್ರಮ ಗಣಿಗಾರಿಕೆಯ ತನಿಖೆ ಜವಾಬ್ದಾರಿಯನ್ನು ಹೊರಿಸಿತ್ತು. ಬಳ್ಳಾರಿ ಮತ್ತಿತರ ಭಾಗದಲ್ಲಿ ಸುದೀರ್ಘ ಪ್ರವಾಸ ಕೈಗೊಂಡು ವಿಸ್ತಾರವಾದ ವರದಿಯೊಂದನ್ನು ಉಗ್ರಪ್ಪ ಮತ್ತವರ ಸಹಪಾಠಿಗಳು ಸಿದ್ಧಪಡಿಸಿ, ರಾಜ್ಯ ಸರಕಾರ, ಕಾಂಗ್ರೆಸ್‌ಗೆ ಸಲ್ಲಿಸಿದರು. ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು ಕೂಡ ಒಂದು ವಿಚಿತ್ರ ಸನ್ನಿವೇಶದಲ್ಲಿ. ಅಕ್ರಮ ಗಣಿಗಾರಿಕೆಯ ಮೇಲೆ ವಿಧಾನ ಸಭೆ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿತ್ತು ಮಧ್ಯ ಪ್ರವೇಶಿಸಿದ ಯಡಿಯೂರಪ್ಪ ಅಕ್ರಮ ಗಣಿಗಾರಿಕೆಯ ವರದಿ ಪಡೆದು ಕ್ರಮ ಕೈಗೊಳ್ಳುತ್ತೆನೆ ಎಂದರು. ತಕ್ಷಣ ಮಧ್ಯ ಪ್ರವೇಶಿಸಿದ ಆಗಿನ ಪ್ರತಿಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ನೀವೆಕೆ ತನಿಖೆ ಮಾಡಿಸುತ್ತೀರಿ ನಮ್ಮ ಪಕ್ಷವೇ ತನಿಖೆ ಮಾಡಿಸಿದೆ. ತಗೊಳ್ಳಿ ವರದಿ ಕ್ರಮ ಕೈಗೊಳ್ಳಿ ಎಂದು ಯಡಿಯೂರಪ್ಪನವರಿಗೆ ಖರ್ಗೆ ವರದಿಯನ್ನು ಸರಕಾರಕ್ಕೆ ಅಧಿಕೃತವಾಗಿ ನೀಡಿದರು. ಅನಂತರ ಅದು ಮಾಮೂಲಿಯಂತೆ ಕಸದ ಬುಟ್ಟಿ ಸೇರಿತೆಂಬುದು ಬೇರೆ ಮಾತು. 
ಆದರೆ, ಆಂಧ್ರ ಪ್ರದೇಶ ಸರಕಾರ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ನಡೆಸಬೇಕು ಎಂದು ತೆಲುಗು ದೇಶಂನ ನಾಯಕ ಚಂದ್ರಬಾಬು ನಾಯ್ಡು ಒತ್ತಾಯಿಸಿ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ಈ ವರದಿಯನ್ನು ಉಲ್ಲೇಖಿಸಿದ್ದರು. ಆದರೆ, ಯಡಿಯೂರಪ್ಪ ಅದನ್ನು ತೆಗೆದು ನೋಡಲಿಲ್ಲ ಎಂಬುದು ಬೇರೆ ಮಾತು.
ಕೇಂದ್ರ ಸರಕಾರದ ಅಧಿಕಾರಿಗಳು ಬಳ್ಳಾರಿಯಲ್ಲಿನ ಗಣಿ ಪ್ರದೇಶಗಳ ಸರ್ವೆಗೆ ಬಂದರೆ ಅಲ್ಲಿನ ಅರಣ್ಯ ಅಧಿಕಾರಿಗಳು ಕೇಂದ್ರ ಸರಕಾರದ ಅಧಿಕಾರಿಗಳನ್ನೇ ತಡೆದು ವಾಪಾಸ್‌ ಕಳಿಸುತ್ತಾರೆ ಎಂದರೆ ರಾಜ್ಯದಲ್ಲಿ ಗಣಿಯ ಪ್ರಭಾವ ಎಷ್ಟು ಎಂಬುದು ಮನದಟ್ಟು  ಆಗುತ್ತದೆ  ಈಗಿರುವಾಗ ಈ ರಾಜ್ಯ ಯಾರ ಆಡಳಿತದಲ್ಲಿದೆ, ಪ್ರಜಾಪ್ರಭುತ್ವವೋ ಗಣಿ ಪ್ರಭುತ್ವವೋ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಉತ್ತರವೂ ಅಷ್ಠೆ ಸ್ಪಷ್ಟ.
ಹಾಗಾದರೇ ಮುಂದೇನು ?
ಪ್ರಗತಿಪರರು, ಪ್ರತಿಪಕ್ಷಗಳು, ಮಾಜಿ ಪ್ರಧಾನಿ, ಕೊನೆಗೆ ಕೇಂದ್ರ ಸರಕಾರ, ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ.................
ಹಿಗೇ ಎಲ್ಲರೂ ತಿರುಗಿ ಬಿದ್ದರೂ ಜಗ್ಗದೆ ಮತ್ತಷ್ಟು ಬೆಳೆಯುತ್ತಿರುವ ಗಣಿ ಮಾಫಿಯಾಕ್ಕೆ ಬ್ರೆಕ್‌ ಹಾಕಲು ಸಾಧ್ಯವೆ ಇಲ್ಲವೆ..............
ಎಂತಹ ಸಿಲ್ಲಿ ಪ್ರಶ್ನೆ. ಛೇ ಉತ್ತರವಿಲ್ಲದ ಇಂತಹ ಪ್ರಶ್ನೆಗಳು ಯಾಕಾದರೂ ಹುಟ್ಟಿಕೊಳ್ಳುತ್ತವೆಯೂ?
ಬಿಡಿ ಮತ್ತೆ ಕಲುಶಿತ ರಾಜಕಾರಣದ ಬಗ್ಗೆ ಚಿಂತೆ ಮಾಡಿ. ನಿಮ್ಮಷ್ಟಕ್ಕೆ ನೀವೆ ಬೇರೆ ಯಾರಿಗೂ ಹೇಳಬೇಡಿ. ಹೇಳಿದರೂ ಪ್ರಯೋಜನವಿಲ್ಲ, ಈಗಾಗಲೇ ಸಿನಿಕರಾಗಿರುವ ಜನ ನಿಮಗೆ ಕೆಲಸವಿಲ್ಲ ಎಂದಾರೂ.............!